ಪುಟಗಳು

ಗುರುವಾರ, ಮಾರ್ಚ್ 4, 2010

ವಿಶ್ವತಾಯಿನುಡಿ ದಿನ


ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ
ವಿಶ್ವ ತಾಯಿನುಡಿ ದಿನದ(ಫೆ ೨೧ )
ಅರ್ಥಪೂರ್ಣ ಆಚರಣೆಯಾಗಲಿ

ಕುಮಾರವ್ಯಾಸನ ಗದಗಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನ ವಿಶಿಷ್ಟವಾಗಿದೆ. ಸಮ್ಮೇಳನದ ಕೊನೆಯ ದಿನ ವಿಶ್ವ ತಾಯಿನುಡಿ ದಿನವಾಗಿದೆ. ಎಲ್ಲರಿಗೂ ತಾಯಿನುಡಿಯ ದಿನದ ನಲ್ಮೆಯ ಹಾರೈಕೆಗಳು.
೧೯೫೨ರ ಫೆಬ್ರುವರಿ ೨೧ರಂದು ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶದಲ್ಲಿ ಬಂಗಾಳಿಗಳ ಮೇಲೆ ಉರ್ದು ಭಾಷೆಯನ್ನು ರಾಷ್ಟ್ರಭಾಷೆಯಾಗಿ ಹೇರುವುದರ ವಿರುದ್ಧ ಬಂಗಾಳಿಗಳು ಹೋರಾಟ ನಡೆಸಿದರು; ಐವರು ಹುತಾತ್ಮರಾದರು. ತಮ್ಮ ತಾಯಿನುಡಿಯಾದ ಬಂಗಾಳಿ ಭಾಷೆಗೆ ರಾಷ್ಟ್ರಭಾಷೆಯ ಗೌರವವನ್ನು ದೊರೆಕಿಸಿಕೊಟ್ಟರು. ಆ ದಿನವನ್ನು ಸಂಯುಕ್ತ ರಾಷ್ಟ್ರಗಳ ಶಿಕ್ಷಣ-ವಿಜ್ಞಾನ-ಸಂಸ್ಕೃತಿ ಸಂಸ್ಥೆ (ಯುನೆಸ್ಕೊ) ವಿಶ್ವ ತಾಯಿನುಡಿ ದಿನ ಎಂದು ಮಾನ್ಯಮಾಡಿದೆ. ಇಂದು ಇಡಿ ವಿಶ್ವವೇ ತಾಯಿನುಡಿಯ ದಿನವನ್ನು ಆಚರಿಸುತ್ತಿದೆ.
ಕನ್ನಡಿಗರು ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿಯೇ ಕರ್ನಾಟಕ ಏಕೀಕರಣದ ಹೋರಾಟವನ್ನೂ ನಡೆಸಿದ ಫಲವಾಗಿ ಕನ್ನಡನಾಡು ಒಂದಾಯಿತು. ಆದರೆ ಈಗ ಕನ್ನಡ ಭಾಷೆಗೆ ಹೊರಗಿನಿಂದ ಮಾತ್ರವಲ್ಲ ಒಳಗಿನಿಂದಲೂ ಅಪಾಯಗಳಿವೆ. ಆದ್ದರಿಂದ ಇಂದು ನಾವು ಕನ್ನಡವನ್ನು ಕಾಪಾಡಿಕೊಳ್ಳುವ ಸಂಕಲ್ಪವನ್ನು ಮಾಡಬೇಕಾಗಿದೆ; ಜಾತೀಕರಣವೆಂಬ ವಾಣಿಜ್ಯ ಹೆಮ್ಮಾರಿಯಿಂದ ತಮ್ಮ ತಾಯಿನುಡಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಜಗತ್ತಿನ ಎಲ್ಲ ಭಾಷೆಗಳ ಪ್ರಜ್ಞಾವಂತರ ಜೊತೆ ಕೈಗೂಡಿಸಬೇಕಾಗಿದೆ.
೧೯೮೦ರ ದಶಕದಲ್ಲಿ ನಡೆದ ಗೋಕಾಕ ವರದಿಯ ಹೋರಾಟದ ಫಲವಾಗಿ ರಾಜ್ಯ ಸರಕಾರ ರೂಪಿಸಿದ ಶಿಕ್ಷಣ ನೀತಿಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಕೆಲವು ಬದಲಾವಣೆಗಳೊಂದಿಗೆ ಅನುಮೋದಿಸಿತು. ಮಕ್ಕಳು ಮ ತಾಯಿನುಡಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂದು ಜಗತ್ತಿನ ಎಲ್ಲ ಪ್ರಮುಖ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. ಅದನ್ನು ನ್ಯಾಯಾಲಯ ಎತ್ತಿಹಿಡಿಯಿತು. ಕರ್ನಾಟಕದಲ್ಲಿ ನೆಲಸಿರುವ ಕನ್ನಡ ಮಾತೃಭಾಷೆಯಲ್ಲದವರಿ ಪ್ರದೇಶಭಾಷೆಯಾದ ಕನ್ನಡ ಎರಡನೆಯ ಮಾತೃಭಾಷೆ; ಅಂಥವರಿಗೆ ತಮ್ಮ ಸ್ವಂತ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವಿಲ್ಲದಿದ್ದಾಗ ಎರಡನೆಯ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ನೀಡುವುದು ಅವರ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಷ್ಟೇ ಪರಿಣಾಮಕಾರಿ ಎಂದು ಸ್ಪಷ್ಟಪಡಿಸಿತು. ಈ ತೀರ್ಪನ್ನು ಸರ್ವೋನ್ನತ ನ್ಯಾಯಾಲಯವೂ ಅನುಮೋದಿಸಿತು.
ಈ ತೀರ್ಪಿನ ಪ್ರಕಾರ ರಾಜ್ಯದ ಮಕ್ಕಳು ಪ್ರಾಥಮಿಕ ಒಂದನೆಯ ತರಗತಿಯಿಂದ ತಮ್ಮ ಮಾತೃಭಾಷೆಯಲ್ಲಿ ಮಾತ್ರ ಕಲಿಯುತ್ತಾರೆ. ಈ ಹಂತದಲ್ಲಿ ಕನ್ನಡೇತರರಿಗೆ ಕನ್ನಡ ಕಡ್ಡಾಯವಲ್ಲ. ಅವರು ಕನ್ನಡ ಮಾತೃಭಾಷೆಯ ಮಕ್ಕಳು ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುತ್ತಾರೆ. ಇದರಿಂದ ಕನ್ನಡೇತರರ ಮಾತೃಭಾಷೆಯ ವಿರುದ್ಧ ಒಂದನೆಯ ತರಗತಿಯಿಂದ ಕನ್ನಡವನ್ನು ಹೇರಿದಂತಾಗುವುದಿಲ್ಲ. ಐದನೆಯ ತರಗತಿಯಿಂದ ಎಲ್ಲರೂ ಸಮಾನವಾಗಿ ಇಂಗ್ಲಿಷ್ ಕಲಿಯಬಹುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ಅದಕ್ಕೆ ಅನುಗುಣವಾಗಿ ಪುನರ್ ರೂಪಿತವಾದ ಕರ್ನಾಟಕ ಸರಕಾರದ ಭಾಷಾನೀತಿಯ ಜಾರಿಗೆ ಸರ್ವೋನ್ನತ ನ್ಯಾಯಾಲಯದಲ್ಲಿ ಮೊಕದ್ದಮೆಗಳು ಬಾಕಿ ಉಳಿದಿವೆ ಎನ್ನುವ ವಾದವನ್ನು ಮನ್ನಿಸಿದ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಸರ್ವೋನ್ನತ ನ್ಯಾಯಾಲಯದಲ್ಲಿದ್ದ ಮೊಕದ್ದಮೆಗಳು ನಿವಾರಣೆಯಾದ ಮೇಲೂ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವಾಗಲಿಲ್ಲ.
ಶಿಕ್ಷಣ ತಜ್ಞರು ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಅನುಮೋದಿಸದಿದ್ದರೂ ಸಾಮಾಜಿಕ ನ್ಯಾಯಕ್ಕಾಗಿ ಅದು ಅಗತ್ಯವೆಂಬ ಕೆಲವು ಕನ್ನಡ ಚಿಂತಕರ ಒತ್ತಾಯವನ್ನು ಅಂದಿನ ಮುಖ್ಯಮಂತ್ರಿ ಶ್ರೀ ಧರ್ಮಸಿಂಗ್ಅವರ ಸರಕಾರ ಅಂಗೀಕರಿಸಿತು. ಒಂದನೆಯ ತರಗತಿಯಿಂದಲೇ ಕಲಿಸಿದರೆ ತಮ್ಮ ಮಕ್ಕಳು ಇಂಗ್ಲಿಷನ್ನು ಚೆನ್ನಾಗಿ ಕಲಿಯಬಹುದೆಂಬ ಪೋಷಕರ ಆಸೆಯೂ ಇದಕ್ಕೆ ಪೂವಾಗಿತ್ತು. ಇದರಿಂದ ಕನ್ನಡೇತರ ಮಾತೃಭಾಷೆಯ ಮಕ್ಕಳು ಮೂರನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಲಿಯುವ ಮುನ್ನವೇ ಅಂದರೆ ಒಂದನೆಯ ತರಗತಿಯಿಂದಲೇ ಆಂಗ್ಲೊ ಇಂಡಿಯನ್ನರನ್ನು ಬಿಟ್ಟರೆ ಬೇರೆ ಯಾರ ಮಾತೃಭಾಷೆ, ರಾಜ್ಯಭಾಷೆ, ಪರಿಸರದ ಭಾಷೆಯೂ ಅಲ್ಲದ ಇಂಗ್ಲಿಷನ್ನು ಕಲಿಯುವ ವಿಲಕ್ಷಣ ಸ್ಥಿತಿ ನಿರ್ಮಾಣವಾಯಿತು. ಇದರಿಂದ ಆರಂಭದಲ್ಲಿಯೇ ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಕೀಳರಿಮೆಯನ್ನು ಬಿತ್ತಿದಂತಾಯಿತು.
ಉಚ್ಚ ನ್ಯಾಯಾಲಯದ ಪೂರ್ಣಪೀಠವು ಇಡೀ ಪ್ರಕರಣವನ್ನು ಹೊಸದಾಗಿ ಆಲಿಸಿ ತೀರ್ಪು ನೀಡಿ ಸರಕಾರದ ಭಾಷಾನೀತಿಯನ್ನು ಸರಕಾರಿ ಶಾಲೆಗಳಿಗೆ ಮಿತಗೊಳಿಸಿತು. ಖಾಸಗಿ ಶಾಲೆಗಳಿಗೆ ಒಂದನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಅವಕಾಶ ಕಲ್ಪಿಸಿತು; ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ; ಇಲ್ಲದವರಿಗೆ ಕನ್ನಡ ಮಾಧ್ಯಮ ಸರಕಾರಿ ಶಾಲೆ ಎನ್ನುವ ಶೈಕ್ಷಣಿಕವಲ್ಲದ ಹೊಸ ಸಾಮಾಜಿಕ ಭೇದವನ್ನು ಹುಟ್ಟುಹಾಕಿತು.
ಮಗು ಮಾತೃಭಾಷೆಯಲ್ಲಿ ಪ್ರ್ರಾಥಮಿಕ ಶಿಕ್ಷಣ ಪಡೆಯುವಾಗ ಭಾಷೆಯನ್ನು ಕಲಿಯುವ ಕೌಶಲಗಳನ್ನೂ ಕಲಿಯುತ್ತದೆ. ಅದ್ದರಿಂದ ಮಾತೃಭಾಷೆಯನ್ನು ಚೆನ್ನಾಗಿ ಕಲಿತ ಅನಂತರ ಎರಡನೆಯ ಭಾಷೆಯನ್ನು ಕಲಿಯಲು  ಸುಲಭವಾಗುತ್ತದೆ ಎನ್ನುವುದು ಶಿಕ್ಷಣ ತಜ್ಞರ ಸ್ಪಷ್ಟ ಅಭಿಪ್ರಾಯ. ಅಲ್ಲದೆ ಮಗು ಶಾಲೆಗೆ ಬರುವ ಮುನ್ನವೇ ತನ್ನ ಮಾತೃಭಾಷೆ, ಪರಿಸರದ ಭಾಷೆಯಲ್ಲಿ ಗ್ರಹಿಸುವ, ಮಾತನಾಡುವ ಕೌಶಲಗಳನ್ನು ಕಲಿರುತ್ತದೆ. ಶಾಲೆಯಲ್ಲಿ ಆ ಭಾಷೆಯಲ್ಲಿ ಓದುವ, ಬರೆಯುವ ಕೌಶಲಗಳನ್ನು ಕಲಿಯುತ್ತದೆ. ಆದರೆ ಒಂದನೆಯ ತರಗತಿಯಿಂದ ತನ್ನ ಮಾತೃಭಾಷೆಯಲ್ಲದ, ಪರಿಸರದ ಭಾಷೆಯೂ ಅಲ್ಲದ ಇಂಗ್ಲಿಷಿನಲ್ಲಿ ಆಲಿಸುವ ಮತ್ತು ಅರ್ಥಮಾಡಿಕೊಂಡು ಮಾತನಾಡುವ ಕೌಶಲಗಳನ್ನು ಕಲಿಯುವ ಮುನ್ನವೇ ಮಗುವಿಗೆ ಇಂಗ್ಲಿಷಿನಲ್ಲಿ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸಲು ಒತ್ತಾಯಿಸುವುದರಿಂದ ಮಗುವಿನ ಪಾಲಿಗೆ ಇಂಗ್ಲಿಷ್ ಕಲಿಕೆ ಗಗನ ಕುಸುಮವೇ ಆಗಿದೆ. ಆದ್ದರಿಂದ ತಜ್ಞರು ಹೇಳುವಂತೆ ಮೊದಲು ಮಗು ತನ್ನ ಮಾತೃಭಾಷೆ ಅಥವಾ ಎರಡನೆಯ ಮಾತೃಭಾಷೆಯಾದ ಪರಿಸರದ ಭಾಷೆಯೂ ಆದ ರಾಜ್ಯಭಾಷೆಯನ್ನು ಚೆನ್ನಾಗಿ ಕಲಿಬೇಕು. ಆಮೇಲೆ ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಗುವಿಗೆ ಇಂಗ್ಲಿಷಿನಲ್ಲಿ ಆಲಿಸುವ ಮತ್ತು ಅರ್ಥಮಾಡಿಕೊಂಡು ಮಾತನಾಡುವ ಕೌಶಲಗಳನ್ನು ಕಲಿಸಬೇಕು. ಈ ಕೌಶಲಗಳು ಬಂದ ಅನಂತರವೇ ಇಂಗ್ಲಿಷಿನಲ್ಲಿ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸಬೇಕು. ಹಾಗಾದಾಗ ಮಾತ್ರ ಇಂಗ್ಲಿಷ್ ಕಲಿಕೆ ಸಾರ್ಥಕವಾಗುತ್ತದೆ.
ಬಹುಜನ ತಂದೆತಾಯಿಗಳ ಅಪೇಕ್ಷೆಯಂತೆ ಒಂದನೆಯ ತರಗತಿಯಿಂದಲೇ ಮಾತೃಭಾಷೆಯ ಜೊತೆ ಇಂಗ್ಲಿಷ್ಅನ್ನೂ ಕಲಿಸಲು ಪ್ರಯತ್ನಿಸುವುದರಿಂದ ಎರಡು ಭಾಷೆಗಳ ಕಲಿಕೆಯೂ ಕುಂದುತ್ತದೆ. ಎಂದು ವಿಶ್ವಬ್ಯಾಂಕ್ ಶಿಕ್ಷಣ ತಜ್ಞರಾದ ಹೆಲನ್ ಅಬಾದ್ಜಿ ಅವ ಮಾಡಿರುವ ಅಧ್ಯಯನದ ಬಗ್ಗೆ ಸ್ವಾಮಿನಾಥನ್ ಅಯ್ಯರ್ ಅವರು ತಮ್ಮ ಜನಪ್ರಿಯ ಅಂಕಣದಲ್ಲಿ ಬರೆದಿದ್ದಾರೆ('ಸ್ವಾಮಿನೊಮಿಕ್ಸ್' - 'ದಿ ಫಸ್ಟ್ ಲರ್ನಿಂಗ್ ಈಸ್ ಬೆಸ್ಟ್ ಇನ್ ಮದರ್ ಟಂಗ್' ದಿ ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಪು ೧೪ ಜನವರಿ ೩೧ ೨೦೧೦).
ಕರ್ನಾಟಕದ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಕರ್ನಾಟಕ ಸರಕಾರದ ಶಿಕ್ಷಣ ನೀತಿಯನ್ನು ಉಚ್ಚ ನ್ಯಾಯಾಲಯದಲ್ಲಿ ಬೆಂಬಲಿಸಿದಂತೆ ಸರ್ವೋನ್ನತ ನ್ಯಾಯಾಲಯದಲ್ಲಿಯೂ ಬೆಂಬಲಿಸಿ ಅದರಲ್ಲಿ ಭಾಗಿಗಳಾಗಿದ್ದಾರೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯಿಲಿ ಅವರಿಂದ ಜಾರಿಗೆ ಬಂದ ಕರ್ನಾಟಕ ಸರಕಾರ ಭಾಷಾನೀತಿಯನ್ನು ಅನಂತರ ಬಂದ ಎಲ್ಲ ಸರಕಾರಗಳು ಪಕ್ಷಭೇದವಿಲ್ಲದೆ ಬೆಂಬಲಿಸುತ್ತ ಬಂದಿರುವುದು ಸಂತೋಷದ ಸಂಗತಿ. ಈ ವಿಷಯದಲ್ಲಿ ಇಂದಿನ ಕರ್ನಾಟಕ ಸರಕಾರ ಮತ್ತು ಪ್ರಾಥಮಿಕ ಶಿಕ್ಷಣ ಮಂತ್ರಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿಲುವು ಮೆಚ್ಚುವಂಥದು.
ಇಂದು ಈ ಸಮ್ಮೇಳನದಲ್ಲಿ 'ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು' ಎನ್ನುವ ನಿರ್ಣಯವನ್ನು ಅಂಗೀಕರಿಸಿ ವಿಶ್ವ ತಾಯಿನುಡಿಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. 
ಮತಧರ್ಮ ನಿರಪೇಕ್ಷ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 
ಎಲ್ಲ ಕನ್ನಡಿಗರೂ ಸಮಾನ ಗೌರವದಲ್ಲಿ ಭಾಗವಹಿಸುವಂತಿರಬೇಕು  
ವೈಯಕ್ತಿಕ ಧಾರ್ಮಿಕ ನಂಬಿಕೆಗಳ 'ದಿವ್ಯಸನ್ನಿ'ಯು 
ಇಂದು ಇಲ್ಲಿಗು ಹಾಯಿತೆ ಎಂದು ಯಾರೂ ತಲೆತಗ್ಗಿಸುವಂತಾಗಕೂಡದು

ಪ್ರೀತಿಯಿಂದ 
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೬೦೦೦೬ 

ಗದಗ೧೯-೨೧ಫೆಬ್ರುವರಿ೨೦೧೦       
ರಾಷ್ಟ್ರೀಯ ಶಕ ೧೯೩೧ ಶಿಶಿರ-ವಸಂತ, ಮಾಘ ೩೦-ಫಾಲ್ಗುಣ                                       
೦ ಪಂಚಮಿ-ಸಪ್ತಮಿ, ಅಶ್ವಿನಿ-ಭರಣಿ, ಶುಕ್ರವಾರ-ಭಾನುವಾರ  

ದೂರವಾಣಿ ೯೪೪೮೪೮೧೪೦೨                                           
ವಿ ಅಂಚೆ panditaradhya@yahoo.com
                      



ಬುಧವಾರ, ಮಾರ್ಚ್ 3, 2010

ಪಂಡಿತ ಜಾಲಚರಿ

ನಮಸ್ಕಾರ.
ಸುಮಾರು ಒಂದು ದಶಕದ ಹಿಂದೆ ಮಿತ್ರರಾದ ಶ್ರೀ ಶೇಷಾದ್ರಿವಾಸು ಅವರ ಬರಹವನ್ನು ಬಳಸಿ ಪಂಡಿತ ಪುಟ ಜಾಲತಾಣವನ್ನು ಜಿಯೊಸಿಟಿಸ್.ಕಾಮ್ ನಲ್ಲಿ ಆರಂಭಿಸಿದ್ದೆ. ಕೆಲವು ಕಾಲ ಅದನ್ನು ನಿಯತವಾಗಿ ಪ್ರಕಟಿಸಿದೆ. ಈ ನಡುವೆ ಕನ್ನಡ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆದವು. ಕನ್ನಡ ಗಣಕ ಪರಿಷತ್ತಿನ ಸ್ಥಾಪನೆ ಆಯಿತು. ಕನ್ನಡ ಲಿಪಿ ತಂತ್ರಾಂಶದಲ್ಲಿ ಶಿಷ್ಟತೆ ಸಾಧ್ಯವಾಯಿತು. ಪ್ರಮಾಣ ಲಿಪಿ ತಂತ್ರಾಂಶವಾಗಿ ನುಡಿ ಲಭ್ಯವಾಯಿತು. ತಂತ್ರಜ್ಞಾನ ಬೆಳೆದಂತೆ ಯೂನಿಕೋಡ್‌ನಲ್ಲಿ ಕನ್ನಡವನ್ನು ಸಮರ್ಪಕವಾಗಿ ಮೂಡಿಸುವುದು ಸಾಧ್ಯವಾಯಿತು. ಸಾವಿರಾರು ಜಾಲಚರಿಗಳು(ವೆಬ್ ಲಾಗ್‌ಗಳು) ಅರಳಿದವು. ಜಿಯೋಸಿಟಿಸ್ ತನ್ನ ಸೇವೆಯನ್ನು ನಿಲ್ಲಿಸಿತು.

ಈಗ ಪಂಡಿತ ಪುಟಗಳನ್ನು ಮತ್ತೆ ಆರಂಭಿಸುತ್ತಿದ್ದೇನೆ. ಇಲ್ಲಿನ ಪುಟಗಳನ್ನು ಪಂಡಿತ ಎಂದು ಮಾತ್ರ ಹೆಸರಿಸಿದ್ದೇನೆ. ಇದು ಅಂತರ ಜಾಲದಲ್ಲಿ ಬರೆಯುವ ದಿನಚರಿಯಾದ್ದರಿಂದ ಇದನ್ನು ಜಾಲಚರಿ ಎಂದೇ ಕರೆದಿದ್ದೇನೆ. ಇದು ನಿಮಗೆ ಮೆಚ್ಚಿಗೆಯಾಗಬಹುದು ಎಂಬ ನಿರೀಕ್ಷೆ ನನ್ನದು.

ನಿಮ್ಮ ಮುಕ್ತ ಅನಿಸಿಕೆಗಳಿಗೆ ಸದಾ ಸ್ವಾಗತವಿದೆ.

ಪ್ರೀತಿಯಿಂದ
ಪಂಡಿತಾರಾಧ್ಯ